“Book Descriptions: ಮಲೆನಾಡು ಅಂದ, ಚಂದ, ಸುಂದರ, ಸುಮಧುರ, ಮೋಹಕ, ಮನಮೋಹಕ ಹೀಗೆ ವರ್ಣನೆಯ ಮಳೆಗಯ್ಯುತ್ತಾ ಹೋದರೆ ಪದಗಳಿಗೂ ಬಹುಶಃ ಬೇಜಾರಾಗುವುದಿಲ್ಲ. ಹೌದು ಆ ಚೆಲುವು , ಪ್ರೌಢಿಮೆ, ಹೊಗಳಿಕೆ ಮಲೆನಾಡಿಗೆ ಸಲ್ಲತಕ್ಕದ್ದೆ. ಮಲೆನಾಡಿನ ವರ್ಣನೆ, ಸಂಸ್ಕೃತಿ, ಜೀವನಶೈಲಿಯ ಬಗ್ಗೆ ಈಗಾಗಲೇ ಸಾಕಷ್ಟು ಓದಿಕೊಂಡಿದ್ದೇವೆ; ತಿಳಿದುಕೊಂಡಿದ್ದೇವೆ. ಆದರೆ ಇತ್ತೀಚಿನ ಮಲೆನಾಡು, ಬದಲಾಗುತ್ತಿರುವ ಮಲೆನಾಡು, ಬದಲಾದ ಮಲೆನಾಡು ನಿಜಕ್ಕೂ ಅಷ್ಟೊಂದು ಮನಮೋಹಕವಾಗಿದೆಯೇ? ಹಸಿರಿದೆ, ಮಳೆಯಿದೆ, ತೊರೆಯಿದೆ, ನೆರೆಯಿದೆ. ಆದರೂ ಕಳೆದುಕೊಂಡದ್ದೇನು ಎಂಬುದನ್ನು ಹುಡುಕುವ ತುಡಿತ ಇಲ್ಲವಾಗಿದೆ.
ನಾನು ಚಿಕ್ಕಂದಿನಲ್ಲಿ ಕಂಡ ಮಲೆನಾಡು ಈಗಿಲ್ಲ. ಮುಂದೆ ಇರುವುದೂ ಇಲ್ಲ. “ಕಾಡಿನ ನೆಂಟರು” ಹಿಂದಿನ, ಇಂದಿನ ಮಲೆನಾಡಿನ ಏರಿಳಿತದ ಹಲವು ಮಾಹಿತಿಗಳನ್ನ ಸಣ್ಣ ಕತೆಗಳ ಮೂಲಕ ಬರೆಸಿಕೊಂಡಿದೆ. ಇಲ್ಲಿ ಅದೇ ಮಲೆನಾಡಿನ ಕಾಡು, ನದಿ, ಸಂಸ್ಕೃತಿ, ಬದಲಾದ ಜೀವನ ಎಲ್ಲವೂ ಇದೆ. ಹಸಿರನ್ನು ಉಳಿಸಬೇಕೆಂಬ ಒಕ್ಕೊರಲ ಕೂಗಿದೆ. ಉಳಿಸಿಕೊಳ್ಳುವ ಮಾತನ್ನು ಯಾಕೆ ಆಡುತ್ತಿದ್ದೀನಿ ಎಂದರೆ ಅದಾಗಲೇ ನಾವು ಎಡವಿ ಬಿದ್ದಾಗಿದೆ. ಈ ಹಿಂದಿನಿಂದ ನೋಡುತ್ತಾ ಬಂದರೆ ಮಲೆನಾಡಿಗೆ ಬಂದ ಯೋಜನೆಗಳೆಷ್ಟು? ಆ ಯೋಜನೆಗಳಿಂದಾದ ಪರಿಣಾಮಗಳೇನು? ಏರಿಳಿತಗಳೆಷ್ಟು? ಇವೆಲ್ಲಾ ವಿಷಯಗಳ ಬಗ್ಗೆ ಅವಲೋಕನ ಮಾಡಿ ಮುಂದೆ ಸಾಗಲೇಬೇಕಾದ ಸಮಯ ಇದು. ನನಗನ್ನಿಸಿದ ಹಾಗೆ ನಾವೀಗ ಅರಣ್ಯಗಳನ್ನ ಬಳಸಿಕೊಂಡ ರೀತಿಗೆ ಸಂಪೂರ್ಣವಾಗಿ ಸುಂಕ ಕಟ್ಟುವ ಕಾಲ ಕೂಡ ದೂರ ಇಲ್ಲ. ಮುಂದಿನ ದಿನಗಳಲ್ಲಿ ಮಲೆನಾಡಿನಲ್ಲೇ ಅರಣ್ಯ ಬೆಳೆಸಲು, ಗಿಡಗಳನ್ನು ನೆಡುವ ದೊಡ್ಡ ಉದ್ಯೋಗ ಸೃಷ್ಟಿಯ ಕ್ರಾಂತಿಯಾಗುವುದೇನೋ! ಯಾಕೆಂದರೆ ಹಸಿರು ಉಳಿಸಿದಾಗ ಮಾತ್ರವೇ ಉಸಿರಾಡಬಹುದು.
“ಈ ಕೃತಿಯಲ್ಲಿರುವ ಸಂಗತಿಗಳು, ಪಾತ್ರಗಳು ಮಲೆನಾಡ ನೆಲದಲ್ಲಿ ನಾವು ಸೃಷ್ಟಿ ಮಾಡಿಕೊಂಡಿರುವುದೇ ಹೊರತು ಅವಾಗೆ ಜನ್ಮ ತಾಳಿದ್ದಲ್ಲ. ಅವುಗಳಿಗೆ ಅಕ್ಷರ ರೂಪ ಕೊಡುವ ಪ್ರಯತ್ನ ಮಾಡಿದ್ದೇನೆ. ಕೆಲವು ಕಾಲ್ಪನಿಕ ಸಂಗತಿಗಳಿದ್ದರೂ ವಾಸ್ತವದ ಎದೆ ಬಡಿತಕ್ಕೆ ಸ್ಪಂದಿಸುತ್ತವೆ” DRIVE