“Book Descriptions: ಹೂವುಗಳೇ ಸೇರಿಕೊಂಡು ಈ ಮನುಷ್ಯ ಜೀವಿಗಳ ಬಗ್ಗೆ ಮಾತಾಡಿಕೊಂಡರೆ ಹೇಗಿರುತ್ತದೆ, ಹಾಗಿದೆ ಈ ಕಿರುಗತೆ. ಪ್ರಫುಲ್ಲವಾದ ಭಂಗುರತೆಯೊಂದು ಪರಿಮಳ ತುಂಬಿಕೊಂಡು ಓಡಾಡಿದಂತೆ. ಒಂದು ನಿಶ್ಶಬ್ದ ಮನೆ, ನಿರ್ಜನ ಅಂಗಳ, ಮೂಕ ಹೂ ಮರ, ಗೇಟು, ಕಿಟಕಿ. ಗೇಟಿನಾಚೆ ಒಂದು ಲೋಕ, ಈಚೆ ಒಂದು ತಬ್ಬಲಿತನದ ದೈನಿಕ. ಎರಡರ ನಡುವೆ ತಂಗಾಳಿಯಂತೆ ಸುಳಿದಾಡುತ್ತ ಇಹದ ಪರಿಮಳದ ದಾರಿಯನ್ನು ಹೊಳೆಸುವ ಸೂಕ್ಷ್ಮ ಕಥನ. ನಮ್ಮ ನಮ್ಮ ನಿತ್ಯದಲ್ಲೇ ನಮ್ಮನ್ನು ಒರೆಗೆ ಹಚ್ಚಬಲ್ಲ ಸರಳ ಸಹಜ ನಿಗೂಢತೆಯೊಂದು ಇದೆ. ಇಲ್ಲೇ ಇದೆ. ಅದು ಕರೆದಾಗ ನಾವು ಕೇಳಿಸಿಕೊಳ್ಳಬೇಕು ಅಷ್ಟೇ! ಮತ್ತು ಅದನ್ನು ಆಲಿಸಲು ಮೊದಲು ಬೇಕಾದದ್ದು ನಮ್ಮೊಳಗಿನ ನಿಶ್ಶಬ್ದ...ಎಂಬುದು ಈ ಕಥೆಯ ಧ್ವನಿ. ಪ್ರತಿ ಜೀವಿಯೂ ಒಂದು ಪಯಣದಲ್ಲಿರುತ್ತಾಳೆ/ನೆ. ಈ ಭಿನ್ನ ಪಯಣದ ರೇಖೆಗಳು ಛಕ್ಕಂತ ಅಲ್ಲಲ್ಲಿ ಪರಸ್ಪರ ಸಂಧಿಸುವುದುಂಟು...ನೋಟವನ್ನೇ ತಿದ್ದುವಂತೆ, ಅಂತಃಕರಣವನ್ನು ಅರಳಿಸುವಂತೆ. ಅಂಥ ಸಂಧಿಸಮಯವೊಂದನ್ನು ಹೌದೋ ಅಲ್ಲವೋ ಎಂಬಂತೆ ಸ್ಪರ್ಶಿಸುವ ಯತ್ನ ಈ ಬರವಣಿಗೆಯದು. ‘ಒಂದು ಉಸಿರನ್ನು ಎತ್ತಿ ಹಾಕಿ ಮತ್ತೆ ಕಾಯುತ್ತ ಕೂತರು’ - ಇಂಥ ತಮ್ಮದೇ ಅಪ್ಪಟ ಒಕ್ಕಣಿಕೆಯ ಸುರೇಂದ್ರನಾಥ್, ಈ ಕಥೆಯ ಜೀವಾಳವೇ ಆಗಿರುವ ನೀರವವೊಂದು ನಮಗೆ ಕೇಳಿಸುವಂತೆ ಬರೆದಿದ್ದಾರೆ. ಪರಿಮಳವನ್ನು ಹೀರಲು ಮೂಗು ಸಾಕು, ಮೂಗುತಿ ಬೇಕಿಲ್ಲ. ಅಂಥ ಪ್ರಾಂಜಲ ಉಸಿರಾಟವನ್ನು ಈ ಕಥೆ ನನಗೆ ರವಾನಿಸಿದೆ.