“Book Descriptions: ‘ತೊಟ್ಟು ಕ್ರಾಂತಿ’ ಕಾವ್ಯಾ ಕಡಮೆ ಅವರ ಕಥಾಸಂಕಲನ. ಈ ಕೃತಿ ಶ್ರೀಧರ ಬಳಗಾರ ಅವರ ಮುನ್ನುಡಿ ಬರಹವಿದೆ. ಕೃತಿಯ ಕುರಿತು ತಿಳಿಸುತ್ತಾ ‘ತೊಟ್ಟು ಕ್ರಾಂತಿ’ ಕಥಾ ಸಂಕಲನವನ್ನು ಓದುತ್ತಿದ್ದಂತೆಯೇ ಆಧುನಿಕ ವಿಕಾರ ಮತ್ತು ಸಾಂಪ್ರದಾಯಕ ಅನಾಚಾರ ಹಾಸುಹೊಕ್ಕಾಗಿರುವ ಮನೆಯೊಂದನ್ನು ಹೊಕ್ಕು ಹೊರ ಬಂದ ಅನುಭವವಾಯಿತು.
ಮುಖ್ಯವಾಗಿ ಬಾಗಿಲಿರದ, ಬಟ್ಟೆ ತೊಟ್ಟಿರದವರ ಈ ಮನೆಯಲ್ಲಿ ಬೆತ್ತಲೆ ನಡೆದಾಡುತ್ತ ಜಾಹೀರಾತಾಗಿರುವ ಸ್ತ್ರೀಯರು, ಮತೀಯ ವಿಕೃತಿ ಮತ್ತು ಪ್ರಾಕೃತಿಕ ದುರ್ವಿಧಿಯನ್ನು ಮುಗ್ಧ ಮಕ್ಕಳಲ್ಲಿ ಎದುರಿಸುವ ಮಾತೃ ಅಂತಃಕರಣದ ತಾಯಂದಿರು ಭೇಟಿಯಾದರು. “ತೊಟ್ಟು ಕ್ರಾಂತಿ” ಕಥೆಯಲ್ಲಿ ಜಗತ್ತಿನಾದ್ಯಂತ ಕಂಪನಿಯ ಶೇರುಗಳನ್ನು ಮಾರಾಟ ಮಾಡಲು ತೆರೆದೆದೆಯ ತರುಣಿಯರು ಮ್ಯಾರಥಾನದಲ್ಲಿ ಭಾಗವಹಿಸುವುದು ಕ್ರಾಂತಿಕಾರಕ ಯೋಜನೆ ಎನ್ನುವುದರಲ್ಲೇ ಬೆಚ್ಚಿಬೀಳಿಸುವ ವ್ಯಂಗ್ಯವಿದೆ.
ಆರ್ಥಿಕ ಲಾಭಕ್ಕಾಗಿ ಮನುಷ್ಯರನ್ನು ಬೀದಿಯಲ್ಲಿ ಅರೆಬೆತ್ತಲ ಜಾಹೀರಾತಾಗಿಸಿ ಮಾರುವ ಸ್ಪರ್ಧೆಗೆ ಇಳಿದಿರುವ ಕಂಪನಿಯ ಸಿಇಓಗಳು ಸ್ವಯಂ ತಮ್ಮ ಮಾನಭಂಗಕ್ಕಿಳಿದಿರುವುದು ನೈತಿಕತೆಯ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ಸ್ತ್ರೀಯ ಸ್ವಾತಂತ್ರ್ಯದ ಅಭಿವ್ಯಕ್ತಿಯಾಗಿ ಮ್ಯಾರಥಾನನ್ನು ನೋಡುವುದರಲ್ಲಿರುವ ದುರಂತದ ಸಾಧ್ಯತೆಯನ್ನು ಕಥೆ ಅತ್ಯಂತ ಸೂಕ್ಷ್ಮವಾಗಿ ಸೂಚಿಸುತ್ತದೆ ಎಂದಿದ್ದಾರೆ.” DRIVE